ದೆವ್ವ -
ಮಾನವ ಬಹು ಹಿಂದಿನಿಂದಲೂ ದೇವರ ಅಸ್ತಿತ್ವದಲ್ಲಿ ನಂಬಿಕೆಯಿಟ್ಟಿರುವಂತೆ ಕೆಲವು ಅತಿಮಾನುಷ ಶಕ್ತಿಗಳ ಅಸ್ತಿತ್ವದಲ್ಲಿಯೂ ಬಲವಾದ ನಂಬಿಕೆಯನ್ನಿಟ್ಟುಕೊಂಡು ಬಂದಿದ್ದಾನೆ. ಭೂತ, ಕಾತ, ಪ್ರೇತ, ಪೀಡೆ, ಪಿಶಾಚಿ, ಜಟಿಯಾ, ರಣ, ಮುನಿ, ಮೋಹಿನಿ, ರಾಕ್ಷಸ ಮುಂತಾದುವುಗಳು ಅವನ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರಿವೆ. ಇಂಥ ಅತಿಮಾನುಷ ಶಕ್ತಿಗಳ ಕಲ್ಪನೆಗೆ ಹಲವು ಕಾರಣಗಳಿರಬಹುದುದಾದರೂ ಅವುಗಳಲ್ಲಿ ಮಖ್ಯವಾದದ್ದು ಆತ್ಮದ ಕಲ್ಪನೆ. ಮಾನವ ಹುಟ್ಟುವುದಕ್ಕೆ ಮುಂಚೆ ಎಲ್ಲಿದ್ದ, ಹೇಗಿದ್ದ, ಅವನು ಸತ್ತ ಮೇಲಿನ ವೃತ್ತಾಂತಗಳೇನು, ಎಂಬ ಹುಟ್ಟಿನ ಹಿಂದಿನ, ಸಾವಿನ ಮುಂದಿನ ರಹಸ್ಯಗಳನ್ನು ಕಂಡುಕೊಳ್ಳುವ ಪ್ರಯತ್ನದಿಂದಾಗಿ ಆತ್ಮದ ಕಲ್ಪನೆ ಹುಟ್ಟಿಕೊಂಡಿರಬೇಕು. ಈ ಆತ್ಮ ದೇಹವನ್ನು ತೊರೆದಮೇಲೇನಾಗುತ್ತದೆ, ಎಲ್ಲಿಗೆ ಹೋಗುತ್ತದೆ ಎನ್ನುವ ಒಗಟುಗಳೇ ಸ್ವರ್ಗ ನರಕಗಳ ಕಲ್ಪನೆಗೂ ಕಾರಣವಾಗಿರಬೇಕು. ಆಯುಸ್ಸು ತುಂಬಿ ಸತ್ತವರು ಸ್ವರ್ಗಕ್ಕೊ ನರಕಕ್ಕೋ ಹೋಗುತ್ತಾರೆಂದು ನಂಬಿಕೊಂಡಿದ್ದರಿಂದ ಇಲ್ಲಿ ಸಮಸ್ಯೆ ಗಹನವಾಗಲಿಲ್ಲ. ಆದರೆ ರುದ್ರ ಭೀಕರವಾಗಿ ಅಮಾನುಷ ರೀತಿಯಲ್ಲಿ ಅಕಾಲ ಮರಣಕ್ಕೆ ತುತ್ತಾದವರ ಆತ್ಮದ ಬಗ್ಗೆ ಸಾಮಾನ್ಯರು ವಿಶೇಷವನ್ನು ತಲೆಗೆ ಹಚ್ಚಿಕೊಂಡಂತೆ ಕಾಣುತ್ತದೆ. ಇಂಥ ಕಾರಣವೊಂದಾದರೆ ಪ್ರಕೃತಿಯಲ್ಲಿ ಜರುಗುವ ಭಯಾನಕ ಘಟನೆಗಳಿಗೆಲ್ಲ ಆದಿಮಾನವ ಉತ್ತರ ಕಂಡುಕೊಳ್ಳಲು ವಿಫಲನಾದಾಗ ಅವೆಲ್ಲವೂ ಅಮಾನುಷ ಶಕ್ತಿಗಳ ಕೈವಾಡವೆಂದು ಭಾವಿಸಿದ್ದು ಇನ್ನೊಂದು ಕಾರಣ. ತನ್ನವರೊಡನೆ ದಟ್ಟ ಕಾಡಿನಲ್ಲಿ ಬರುತ್ತಿರುವಾಗ ದಾರಿ ತಪ್ಪಿಸಿಕೊಂಡ ಆದಿವಾಸಿ ಕೋಡಗಲ್ಲುಗಳ ಮೇಲೆ ನಿಂತು ತನ್ನವರನ್ನು ಕೂಗಿ ಕರೆದಾಗ ಗಿರಿಗಹ್ವರಗಳಿಂದ ಬಂದ ಪ್ರತಿಧ್ವನಿಗಳು ಅವನ ಎದೆ ನಡುಗುವಂತೆ ಮಾಡಿರಬಹದು ; ದೈತ್ಯಾಕಾರದಲ್ಲಿ ಬೆಳದ ಹೆಮ್ಮರಗಳ ಕೆಳಗೆ ನಿಂತು ಅವನು ಆಲಿಸಿರಬಹುದಾದ ವಿಚಿತ್ರ ಸದ್ದುಗಳು ಅವನನ್ನು ಭಯಗೊಳಿಸಿರಬಹುದು ; ಗಂವ್ ಎನ್ನುವ ಕತ್ತಲೆಯಲ್ಲಿ ಬರುವಾಗ ಅವನ ಮಾನಸಿಕ ಶೈಶವಸ್ಥಿತಿ ಚಿತ್ರವಿಚಿತ್ರವಾದ ಆಕಾರಗಳನ್ನು ಸೃಷ್ಟಿಸಿಕೊಂಡು ತತ್ತರಿಸಿ ಹೋಗಿರಬಹುದು. ಕಗ್ಗಾಡಿನ ನಡುವೆ ಯಾವುದೋ ಅಪರಿಚಿತ ಪ್ರಾಣಿಯ ಕೂಗು ಭಯವಿಹ್ವಲನಾಗುವಂತೆ ಮಾಡಿರಬಹುದು ; ಕಗ್ಗತ್ತಲಿನಲ್ಲಿ ಕೋರೈಸುವ ಕಣ್ಣುಗಳ ಪ್ರಾಣಿಗಳು ಮರದಿಂದ ಮರಕ್ಕೆ ಜಿಗಿಯುತ್ತ ಮರೆಯಾದುದನ್ನು ಕಂಡು ಆತ ಬೆದರಿ ಹೋಗಿರಬಹುದು. ಅಮಾನುಷ ರೀತಿಯಲ್ಲಿ ಕೊಲೆಗೀಡಾದ ವ್ಯಕ್ತಿಯ ರೂಪವೇ ಭ್ರಮೆಯಿಂದ ಅವನ ಕನಸು ಮನಸ್ಸುಗಳಲ್ಲಿ ಮತ್ತೆ ಮತ್ತೆ ಗೋಚರಿಸಿ ದಿಗ್ಭ್ರಮೆಗೊಳಿಸಿರಬಹುದು. ಇಂಥ ಹಲವಾರು ಘಟನೆಗಳು ಆದಿವಾಸಿಯನ್ನು ದಿಕ್ಕುತಪ್ಪಿಸಿ ಹೃದಯವನ್ನು ಅತಿಕ್ರಮಿಸಿ ಪೀಡಿಸಿರಬಹುದು. ಹಾಗೆಯೇ ಅತಿಮಾನುಷ ಶಕ್ತಿಗಳ ಕಲ್ಪನೆಗೆ ದಾರಿ ಮಾಡಿಕೊಟ್ಟಿರಬಹುದು. 

	ವೈಜ್ಞಾನಿಕವಾಗಿ ಈ ಅತಿಮಾನುಷ ಶಕ್ತಿಗಳನ್ನು ಕುರಿತು ವಿಚಾರ ಮಾಡಿದರೆ ಇಂಥ ಕಲ್ಪನೆಗಳು ಬಾಲಿಶವಾದವೆಂದು ತೋರುತ್ತವೆ. ಇಂಥ ಶಕ್ತಿಗಳನ್ನು ಬಲವಾಗಿ ನಂಬಿ ಅತಿಯಾಗಿ ತಲೆ ಹಚ್ಚಿಕೊಂಡಿರುವವರ ಬಗೆಗೆ ನಗೆ ಬರಬಹುದು ಇಲ್ಲವೆ ಮರುಕ ಹುಟ್ಟಬಹುದು. ಆದರೆ ವಿಜ್ಞಾನ ಬಹಳಷ್ಟು ಅಗೋಚರ ಶಕ್ತಿಗಳಿಂದ ಸಂಭವಿಸಿದ ಘಟನೆಗಳಿಗೆ ವಿವರಣೆ ಕೊಡುವಲ್ಲಿ ಅಪಕ್ವವಾಗಿರುವುದರಿಂದ ನಾಗರಿಕ ಜನಾಂಗಗಳಲ್ಲೂ ದಟ್ಟವಾಗಿಯಲ್ಲದಿದ್ದರೂ ದೆವ್ವ ಮುಂತಾದ ಅತಿಮಾನುಷ ಶಕ್ತಿಗಳ ಬಗ್ಗೆ ನಂಬಿಕೆ ಉಳಿದಿದೆ. ಅಷ್ಟು ಮಾತ್ರವೇಕೆ ಪರಾಮನೋವಿಜ್ಞಾನ ಅತಿಮಾನುಷ ಶಕ್ತಿಗಳನ್ನು ಒಪ್ಪಿಕೊಂಡಿದೆ. ಹೀಗಾಗಿ ಜಗತ್ತಿನ ಎಲ್ಲ ಜನಾಂಗಗಳಲ್ಲೂ ದೆವ್ವಗಳ ಅಸ್ತಿತ್ವದ ಬಗ್ಗೆ ನಂಬಿಕೆ ಉಳಿದು ಬಂದಿದೆ. 

	ದೆವ್ವಗಳಾಗಲು ಕಾರಣಗಳು : ಮನುಷ್ಯನಿಗೆ ಮೂರು ಜೀವಗಳಿವೆಯೆಂದು ನಂಬಲಾಗಿದೆ. 1 ಮೇವುಜೀವ, 2 ಬೆದರುಜೀವ, 3 ರಕ್ತಜೀವ. ಮೇವು ಜೀವ ಇಹಪರಗಳೆರಡರ ನಂಟನ್ನೂ ಪೂರ್ಣವಾಗಿ ಪಡೆದಿರುವಂಥದು. ಇದಕ್ಕೆ ತಾನು ಮಾಡಿದ ಧರ್ಮಕರ್ಮ ಪಾಪಪುಣ್ಯಗಳೆಲ್ಲಕ್ಕೂ ಯಮಲೋಕದಲ್ಲಿ ವಿಚಾರಣೆ ನಡೆದು ಸ್ವರ್ಗ ನರಕ ಅಥವಾ ಪುನರ್ಜನ್ಮ ಪ್ರಾಪ್ತಿಯಾಗುತ್ತದೆ. ಬೆದರು ಜೀವ ಸುಖದುಃಖ ನೋವು ನಲಿವು ಆಶೆ ಅಕಾಂಕ್ಷೆ, ಹೆದರಿಕೆ ಬೆದರಿಕೆಗಳೆಲ್ಲಕ್ಕೂ ಕಾರಣವಾದದ್ದು ಮಾನವನ ಎಲ್ಲ ಕ್ರಿಯೆಗಳಿಗೂ ಇದೇ ಕಾರಣ. ಇದರ ಪ್ರೇರಣೆಯಿಂದಾದ ಎಲ್ಲ ಕರ್ಮಗಳೂ ಮೇವು ಜೀವಕ್ಕೆ ಅಂಟುತ್ತವೆ. ರಕ್ತ ಜೀವ ಸಂಪೂರ್ಣವಾಗಿ ಇಹಲೋಹಕ್ಕೆ ಸಂಬಂಧಿಸಿದ್ದು. ಮೇವುಜೀವ ಬೆದರು ಜೀವಗಳು ಪರಲೋಕಕ್ಕೆ ಹೋಗಬೇಕಾದರೆ ರಕ್ತಜೀವ ಆಯುಸ್ಸು ಮುಗಿದಿರಬೇಕು. ಇಲ್ಲದಿದ್ದರೆ ಅವಕ್ಕೆ ಶಕ್ತಿಯೇ ಇಲ್ಲ. ಇದರ ಆಯುಸ್ಸು ವಿಧಿಬರಹವನ್ನು ಅವಲಂಬಿಸಿರುತ್ತದೆ. ಆಯುಸ್ಸು ಮುಗಿಯದಿದ್ದರೆ, ದೇಹ ಯಾವುದಾದರೂ ಕಾರಣದಿಂದ ನಾಶವಾದರೆ, ಅಶರೀರಿಯಾದ ಇದು ಉಳಿಯಲು ಆಶ್ರಯವಿಲ್ಲದೆ ಪರಲೋಕಕ್ಕೆ ದಾರಿಯಿಲ್ಲದೆ ಗಾಳಿ ಅಥವಾ ದೆವ್ವವಾಗುತ್ತದೆ. ರಕ್ತಜೀವ ನಾನಾಕಾರಣಗಳಿಂದ ಪರಲೋಕದ ಪರವಾನಗಿಯನ್ನು ಕಳೆದುಕೊಂಡು ಇಹದಲ್ಲೇ ಉಳಿಯಬೇಕಾದ ಸಂದರ್ಭಗಳು ಒದಗಿ ಬರುತ್ತವೆ. ಸಾಯುವಾಗ ಬಾಯಿಗೆ ನೀರು ಬಿಡದಿದ್ದರೆ, ನೀರಿಗೆ ಬಿದ್ದು, ನೇಣುಹಾಕಿಕೊಂಡು, ವಿಷಕುಡಿದು, ಕೊಲೆಯಾಗಿ, ಬೆಂಕಿಯಲ್ಲಿ ಸುಟ್ಟು, ಅಪಘಾತಗಳಿಗೆ ಸಿಕ್ಕಿ ಅಥವಾ ಯಾವುದೇ ವಿಧವಾದ ಅಕಾಲ ಮರಣಕ್ಕೆ ತುತ್ತಾದರೂ ಅಂಥವರು ದೆವ್ವಗಳಾಗುತ್ತಾರೆ. ಅಲ್ಲದೆ ದುರಾಶೆಯುಳ್ಳವರು, ಕಳ್ಳರು, ಕೊಲೆಗಡುಕರು, ಕ್ರೂರಿಗಳು, ಕಾಮಿಗಳು, ಜಿಪುಣರು, ಅಸೂಯಾಪರರು, ಅಸಾತ್ತ್ವಿಕರು, ಸ್ತ್ರೀಹತ್ಯೆ, ಭ್ರೂಣಹತ್ಯೆ ಮಾಡಿದವರು, ದ್ರೋಹಿಗಳು ಮುಂತಾದವರೆಲ್ಲರೂ ದೆವ್ವವಾಗುವುದಾಗಿ ನಂಬಿಕೆ.

		ಸತ್ತವರು ದೆವ್ವವಾಗಿದ್ದಾರೆಯೇ ಇಲ್ಲವೆ ಎಂಬುದನ್ನು ಅವರ ಸಮಾಧಿ ಪರೀಕ್ಷೆಯಿಂದ ಕಂಡುಕೊಳ್ಳುತ್ತಾರೆ. ಬಹಳ ದಿನಗಳಾದರೂ ಗುದ್ದ ತಗ್ಗದೆ ಉಬ್ಬಿಕೊಂಡೇ ಇದ್ದರೆ ಅವರು ದೆವ್ವವಾಗಿದ್ದಾರೆಂದು ಭಾವಿಸುತ್ತಾರೆ. ಸತ್ತವರು ದೆವ್ವಗಳಾಗಿ ತಮ್ಮ ಬಂಧುಬಳಗವನ್ನು ತೊರೆದು ಇರಲಾರದೆ ಶ್ಮಶಾನದಿಂದ ಹಿಂದಕ್ಕೆ ಬಂದು ಬಿಡುತ್ತವೆ. ಆದ್ದರಿಂದ ಶವವನ್ನು ಶ್ಮಶಾನಕ್ಕೊಯ್ಯುವಾಗ ಅದರ ಹಿಂದೆ ಎಳ್ಳು, ಸಾಸಿವೆ, ರಾಗಿ, ಹುಚ್ಚೆಳ್ಳು, ಮುಂತಾದ ಧಾನ್ಯಗಳನ್ನು ಎರಚಿಕೊಂಡು ಹೋಗಬೇಕು. ಹೀಗೆ ಮಾಡುವುದರಿಂದ ಸತ್ತವನ ದೆವ್ವ ಆ ರಾತ್ರಿಯೇ ತನ್ನ ಮನೆಯನ್ನು ಸೇರಲು ಹೊರಟು ದಾರಿಯಲ್ಲಿ ಅಡ್ಡಲಾಗಿ ಸುರಿದಿರುವ ಧಾನ್ಯಗಳನ್ನು ತುಳಿಯದೆ ಆರಿಸಿಕೊಂಡು ಬರಬೇಕಾಗುತ್ತದೆ, ಆ ಧಾನ್ಯಗಳನ್ನೆಲ್ಲ ಆರಿಸುವ ಹೊತ್ತಿಗೆ ಬೆಳಕಾಗಿ ಅದಕ್ಕೆ ದಾರಿತಪ್ಪಿ ಹೋಗುತ್ತದೆ. ಶವಸಂಸ್ಕಾರ ಮಾಡಿ ಹಿಂದಿರುಗಿದ ಮೇಲೆ ಮನೆಯ ಒಂದು ಮೂಲೆಯಲ್ಲಿ ಅಷ್ಟಗಲ ಸಾರಿಸಿ ಒಂದು ಕೈಯೆಣ್ಣೆ ದೀಪ ಹಚ್ಚಿ ಒಂದು ಪಡಿ ಅಕ್ಕಿಯನ್ನು ತಲೆಸವರಿ ಮಡಿಗಿ ಒಂದು ಚೊಂಬು ನೀರಿಟ್ಟು ಗಂಧದಕಡ್ಡಿ ಬೆಳಗಿ ಅವುಗಳ ಮೇಲೆ ಒಂದು ಹೆಡಿಗೆ ಬೋರಲಿಡಬೇಕು. ಮಾರನೆಯ ದಿನ ಬೆಳಗ್ಗೆ ಹೆಡಿಗೆ ತೆಗೆದುನೋಡಿದಾಗ ಅಕ್ಕಿ ಹಾಗೂ ನೀರು ಕಡಿಮೆಯಾಗಿದ್ದರೆ ಸತ್ತವನಿಗೆ ಇನ್ನೂ ಆಯುಷ್ಯವಿತ್ತೆಂದು ಅವನು ದೆವ್ವವಾಗುವ ಸಂಭವ ಉಂಟೆಂದು ಅರ್ಥ. 

		ದೆವ್ವದ ಬಗೆಗಳು : ಹೆರಿಗೆ ಸಮಯದಲ್ಲೊ ಮೂರು ವರ್ಷ ತುಂಬುವುದಕ್ಕೆ ಮೊದಲೊ ಮಕ್ಕಳು ಸತ್ತರೆ ಪೀಡೆ ಎಂಬ ದೆವ್ವಗಳಾಗುತ್ತವೆ. ಕೊಲೆಯಿಂದ ಸತ್ತವರು ಕಾತ ಎಂಬ ದೆವ್ವವಾಗುತ್ತಾರೆ. ಬೆಂಕಿಯಲ್ಲಿ ಸುಟ್ಟು ಹೋದವರು ಭೂತ ಎಂಬ ದೆವ್ವವಾಗುತ್ತಾರೆ. ನೀರಿನಲ್ಲಿ ಸತ್ತವರು ಪ್ರೇತ ಎಂಬ ದೆವ್ವವಾಗುತ್ತಾರೆ. ಹಣದ ವಿಚಾರದಲ್ಲಿ ದುರಾಶೆಯಿಟ್ಟುಕೊಂಡು ಸತ್ತವರು ರಣ ಎಂಬ ದೆವ್ವವಾಗುತ್ತಾರೆ. ಹೋರಾಟದಲ್ಲಿ ಸತ್ತ ವೀರರು ಜಟಿಯಾ ಎಂಬ ದೆವ್ವವಾಗುತ್ತಾರೆ. ಸತ್ತ ಗರ್ಭಿಣಿಯರು ಗಾಳಿ ಎಂಬ ದೆವ್ವವಾಗುತ್ತಾರೆ. ನೇಣು ಹಾಕಿಕೊಂಡು ಸತ್ತವರು ಗರಾವು ಎಂಬ ದೆವ್ವವಾಗುತ್ತಾರೆ. ಅಕಾಲ ಮರಣಕ್ಕೆ ತುತ್ತಾದ ಬಾಣಂತಿ ಬನ್ತಿ ಎಂಬ ದೆವ್ವವಾಗುತ್ತಾರೆ. ಪ್ರಾಯದ ಹುಡುಗಿ ಅಕಾಲ ಮರಣಕ್ಕೆ ತುತ್ತಾದರೆ ಮೋಹಿನಿ ಎಂಬ ದೆವ್ವವಾಗುತ್ತಾಳೆ. ಬ್ರಾಹ್ಮಣರ ದೆವ್ವಗಳನ್ನು ಪಿಶಾಚಿ ಅಥವಾ ಬ್ರಹ್ಮ ಪಿಶಾಚಿ ಎಂದು ಕರೆಯುತ್ತಾರೆ. ಶಾಪಗ್ರಸ್ತ ದೇವತೆಗಳು ಭೂಲೋಕದಲ್ಲಿ ಬೇತಾಳಗಳಾಗಿ ಜನ್ಮವೆತ್ತುತ್ತಾರೆ. ಹೀಗಿರುವ ನಾನಾ ಬಗೆಯ ದೆವ್ವಗಳಿಗೆ ಅಧಿಪತಿ ಮುನೀಶ್ವರ. ಮುನೀಶ್ವರನನ್ನು ಕೆಲವು ಕಡೆ ಬೇತಾಳ ಭೂತನಾಥ ಎಂದೂ ಕರೆಯುತ್ತಾರೆ.  

		ದೆವ್ವಗಳ ಅಧಿಪತಿ : ದೆವ್ವಗಳ ಅಧಿಪತಿಯಾದ ಮುನೀಶ್ವರನನ್ನು ಈಶ್ವರನ ಅಂಶವೆಂದು ಹೇಳುತ್ತಾರೆ. ಅವನ ಆಕಾರ ರುದ್ರ ಭೀಕರವಾಗುತ್ತದೆ. ಅವನಿಗೆ ಮೂರು ಕಣ್ಣುಗಳಿವೆ. ನೀಳವಾದ ಜಟೆಯಿದೆ. ಎಡದ ಕಾಲಿಗೆ ಎಳವಾರಿ ಜಂಗು, ಬಲದ ಕಾಲಿಗೆ ಭಾಪುರಿ ಜಂಗುಗಳನ್ನು ಆತ ಧರಿಸಿರುತ್ತಾನೆ. ಕೈಯಲ್ಲಿ ತ್ರಿಶೂಲವಿರುತ್ತದೆ. ಅಮವಾಸ್ಯೆಯ ರಾತ್ರಿಯಲ್ಲಿ ಅವನು ತಾನು ವಾಸವಿದ್ದ ಮರದಿಂದ ಮತ್ತೊಂದು ಮರಕ್ಕೆ ಪ್ರಯಾಣ ಮಾಡುತ್ತಾನೆ. ಅವನನ್ನು ಎಲ್ಲ ದೆವ್ವಗಳು ಪಲ್ಲಕ್ಕಿಯಲ್ಲಿ ಹೊತ್ತು ಕೊಳ್ಳಿಗಳನ್ನು ಹಿಡಿದು ಕುಣಿಯುತ್ತಾ ಸಾಗಿಸುತ್ತವೆ. ಮುನಿದೆವ್ವ ಹಗಲಿನಲ್ಲಿ ಸುಂಟರಗಾಳಿ ರೂಪದಲ್ಲಿ ಪ್ರಯಾಣ ಮಾಡುತ್ತಾನೆ. ಈ ಮುನಿ ರಾತ್ರಿಯಲ್ಲಿ ಉರಿಯುವ ಪತ್ತು ಮದ್ದಳೆ ತಾಳ ಮೇಳಗಳಿಂದ ವೈಭವದ ಮೆರವಣಿಗೆ ಹೊರಡುವುದನ್ನು ಕೆಲವರು ಕಂಡಿರುವೆವೆಂದು ಹೇಳುತ್ತಾರೆ. ಮುನಿಯ ಹೆಂಡತಿ ಚೌಡಿ. ಪ್ರತಿವರ್ಷವೂ ಹೊಲಗದ್ದೆಗಳ ಬಳಿಯಲ್ಲಿ ಇವರಿಬ್ಬರಿಗೂ ಶಾಂತಿ ಮಾಡುವ ಸಂಪ್ರದಾಯ ಉಳಿದು ಬಂದಿದೆ. 

		ದೆವ್ವಗಳ ಆಕಾರ : ದೆವ್ವಗಳು ಅಶರೀರಿಗಳಾದ್ದರಿಂದ ಅವನ್ನು ಸಾಮಾನ್ಯವಾಗಿ ಗಾಳಿಗಳೆಂದು ಕರೆಯುತ್ತಾರೆ. ಅಲ್ಲದೆ ಅವು ನರೆಳುಗಳ ರೂಪದಲ್ಲಿ ಸಂಚರಿಸುತ್ತವೆಯೆಂದೂ ಹೇಳುತ್ತಾರೆ. ಆದರೆ ಅವು ಇಷ್ಟಬಂದ ರೂಪಗಳಲ್ಲಿ ಕಾಣಿಸಿಕೊಳ್ಳಬಲ್ಲವು. ಹೀಗಾಗಿ ದೆವ್ವಗಳ ಆಕಾರ ಇದೇ ಸರಿ ಎಂದು ಹೇಳಲಾಗದಿದ್ದರೂ ಸಾಮಾನ್ಯವಾಗಿ ದೆವ್ವ ಎಂದರೆ ಹೇಗಿರುತ್ತದೆ ಎಂಬ ಒಂದು ಕಲ್ಪನೆಯಿದೆ : ದೆವ್ವಗಳು ಕರ್ರಗಿರುತ್ತವೆ. ತಲೆಯನ್ನು ಕೆದರಿಕೊಂಡಿರುತ್ತವೆ. ನೆರಳುಗಳಂತೆ ಓಡಾಡುತ್ತವೆ. ನೆಲದ ಮೇಲೆ ಕಾಲೂರಿರುವುದಿಲ್ಲ. ಕಾಲಿನ ಹಿಮ್ಮಡಿ ಮುಂದಾಗಿಯೂ ಬೆರಳುಗಳು ಬೆನ್ನಕಡೆಗೂ ಇರುತ್ತವೆ. ಯಾವಾಗಲೂ ಕಣ್ಣುಗಳನ್ನು ಮೆಡ್ಡರಿಸಿಕೊಂಡಿರುತ್ತವೆ. ಅವಕ್ಕೆ ಕೋರೆ ಹಲ್ಲುಗಳುಂಟು. ವಿವಿಧ ಪ್ರಾಣಿಗಳ ರೂಪದಲ್ಲೂ ಅವು ಕಾಣಿಸಿಕೊಳ್ಳುತ್ತವೆ. ನಡೆಯುವಾಗ ಕಟ್ ಕಟ್ ಎಂಬ ಶಬ್ದವಾಗುತ್ತದೆ. ಈ ಮುಂತಾಗಿ ದೆವ್ವಗಳ ಆಕಾರವನ್ನು ಕಲ್ಪಿಸಲಾಗಿದೆ. 

		ಆಹಾರ-ವಿಹಾರಗಳು : ದೆವ್ವಗಳ ಆಹಾರಗಳೆಲ್ಲ ಸಾಮಾನ್ಯವಾಗಿ ಹೊಲಸು, ಅವು ಮಲಮೂತ್ರವನ್ನು ಸೇವಿಸುವುದಾಗಿ ಹೇಳುತ್ತಾರೆ. ಕೋಳಿ, ಕುರಿ, ದನ, ಕರು, ಕುರಿ, ಕೋಣ, ಮನುಷ್ಯ ಮುಂತಾದವುಗಳ ರಕ್ತಮಾಂಸಗಳಿಂದ ಅವು ತೃಪ್ತಿಗೊಳ್ಳುತ್ತವೆ. ಹಂದಿಯ ಮಾಂಸವೆಂದರೆ ಅವಕ್ಕೆ ಆಪ್ಯಾಯ ಮಾನವಂತೆ. ಇವಲ್ಲದೆ ಉಳಿದ ತಿಂಡಿತಿನಿಸುಗಳೂ ಅವಕ್ಕೆ ಒಗ್ಗುತ್ತವೆ. ಆದರೆ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಪವಿತ್ರ ವಸ್ತುವೂ ಅವಕ್ಕೆ ಸೇರುವುದಿಲ್ಲ. ಅವನ್ನು ಕಂಡರೆ ಅವಕ್ಕೆ ಭಯ. ಕೊಳಚೆನೀರು, ರಕ್ತ, ಹೆಂಡ ಹಾಗೂ ಮೂತ್ರಗಳೇ ಅವುಗಳ ಪಾನೀಯಗಳು. ಸಿಹಿಪದಾರ್ಥಗಳಲ್ಲಿ ಬೆಲ್ಲವೆಂದರೆ ಅವಕ್ಕೆ ಅಚ್ಚುಮೆಚ್ಚು. ಆದ್ದರಿಂದ ಅವು ಆಲೆಮನೆಯನ್ನು ಸೇರಿ ಬಿಡುತ್ತವೆ. ಅವುಗಳು ಬೆಲ್ಲ ಹದವಾಗದಂತೆ ಕೆಡಿಸುತ್ತವೆ. ಆದ್ದರಿಂದ ಅವು ಆಲೆಮನೆಯನ್ನು ಪ್ರವೇಶಿಸದಂತೆ ಮೊದಲೇ ಪ್ರಾಣಿ ಬಲಿಕೊಡುವ ರೂಢಿಯುಂಟು. 

		ಹಗಲು ದೆವ್ವಗಳ ಪಾಲಿಗೆ ಶತ್ರು. ಬೆಳಕೆಂದರೆ ಅವು ತತ್ತರಿಸಿಹೋಗುತ್ತವೆ. ಆದರೂ ಮಧ್ಯಾಹ್ನ ಹಾಗೂ ನಡುರಾತ್ರಿಗಳಲ್ಲಿ ಅವುಗಳಿಗೆ ವಿಶೇಷವಾದ ಶಕ್ತಿ ಬರುತ್ತದೆ. ಸಾಮಾನ್ಯವಾಗಿ ಅವು ನಿರ್ಭಯವಾಗಿ ಸಂಚರಿಸುವುದು ರಾತ್ರಿಯ ವೇಳೆಯಲ್ಲಿಯೇ. ಅವು ಯಾವಾಗಲೂ ಕತ್ತಲನ್ನೇ ಬಯಸುವುದರಿಂದ ದಟ್ಟವಾಗಿ ಬೆಳೆದ ಮರಗಳಲ್ಲಿ ಹಳೆಯ ಬಾವಿಗಳಲ್ಲಿ ಹಳೆಯ ಮನೆಗಳಲ್ಲಿ ಆಯವಿಲ್ಲದ ಮನೆಗಳಲ್ಲಿ ಎಕ್ಕದ ಗಿಡದ ಬುಡದಲ್ಲಿ ಬಿಳಲು ಬಿಟ್ಟ ಆಲದಮರ ಹಾಗೂ ಹುಣಸೇ ಮರಗಳಲ್ಲಿ ಕೆರೆ ಕೊಳ ಬಂಡೆ ಗವಿ ಮುಂತಾದ ಕಗ್ಗತ್ತಲ ಸ್ಥಳಗಳಲ್ಲಿ ವಾಸಿಸುತ್ತವೆ. ಶ್ಮಶಾನಗಳಲ್ಲಿ ದೆವ್ವಗಳಿರುವುದಿಲ್ಲ ಎಂಬ ನಂಬಿಕೆ ಕೆಲವರಲ್ಲಿದ್ದರೆ ಮತ್ತೆ ಕೆಲವರು ಇರುತ್ತವೆ ಎಂದು ನಂಬುತ್ತಾರೆ. 

		ಮೋಹಿನಿ ಎಂಬ ದೆವ್ವಕ್ಕೆ ಹುಣ್ಣಿಮೆಯ ದಿನ ಅತ್ಯಂತ ಪ್ರಿಯವಾದರೆ ಉಳಿದ ದೆವ್ವಗಳಿಗೆ ಅಮಾವಾಸ್ಯೆ ಎಂದರೆ ಸಡಗರವೋ ಸಡಗರ. ಕತ್ತಲ ವೇಳೆಯಲ್ಲಿ ಅವುಗಳ ಚಟುವಟಿಕೆ ನಿರಂತರವಾಗಿ ಸಾಗುತ್ತದೆ. ಹಗಲಲ್ಲಿ ಅವು ನಿದ್ರಿಸುತ್ತವೆ. 

		ಗುಣ ಸ್ವಭಾವಗಳು : ದೆವ್ವಗಳು ಎಲ್ಲರ ಕಣ್ಣಿಗೂ ಕಾಣಿಸುವುದಿಲ್ಲ. ಅವು ದೆವ್ವಗಣ್ಣಿನವರಿಗೆ ಮಾತ್ರ ಕಾಣಿಸಿಕೊಳ್ಳುತ್ತವೆ. ಅಲ್ಲದೆ ನಾಯಿಗಳಿಗೆ ದೆವ್ವಗಳು ಕಾಣಿಸಿಕೊಳ್ಳುತ್ತವೆ. ದೇವಗಣದವರ ಕಣ್ಣಿಗೆ ದೆವ್ವಗಳು ಗೋಚರಿಸುವುದಿಲ್ಲ. ದೆವ್ವಗಳು ಮನುಷ್ಯರನ್ನು ಶತ್ರುಗಳೆಂದೇ ಭಾವಿಸುತ್ತವೆ, ಮನುಷ್ಯರಿಗೆ ಕಿರುಕುಳ ಕೊಡುವುದೆಂದರೆ ಅವಕ್ಕೆ ಎಲ್ಲಿಲ್ಲದ ಉತ್ಸಾಹ ಹಾಗೂ ಆನಂದ. ಹೆಣ್ಣುದೆವ್ವಗಳು ಗಂಡಸರನ್ನು ಗಂಡುದೆವ್ವಗಳು ಹೆಂಗಸರನ್ನು ಹಿಡಿದುಕೊಳ್ಳುವುದು ಸಾಮಾನ್ಯವಾದರೂ ಇದಕ್ಕೆ ಅಪವಾದ ಇಲ್ಲದೆ ಇಲ್ಲ. 

		ಸ್ವೇಚ್ಛೆಯಾಗಿ ವಿಹರಿಸುವ ದೆವ್ವಗಳು ಮಾನವರನ್ನು ಕಂಡರೆ ಬಗೆಬಗೆಯಾಗಿ ಚೇಷ್ಟೆ ಮಾಡುತ್ತವೆ. ಅವು ಮನುಷ್ಯರನ್ನು ಹಿಡಿದುಕೊಳ್ಳಬೇಕೆಂದು ಬಯಸಿದಾಗ ಮೊದಲು ಅವನ ಹಿಮ್ಮಡಿಯನ್ನು ಮುಟ್ಟುತ್ತವೆ. ಇದರಿಂದಲೇ ಅವನು ಶಕ್ತನೋ ದುರ್ಬಲನೋ ಎಂಬುದು ಅವಕ್ಕೆ ತಿಳಿಯುತ್ತದೆ. ಆಗ ಅವು ಗಾಳಿಯ ರೂಪದಲ್ಲಿ ಗುದದ್ವಾರದ ಮೂಲಕ ಪ್ರವೇಶ ಮಾಡುತ್ತವೆ. ಮಲಗಿದ್ದ ವ್ಯಕ್ತಿಯನ್ನು ಬಾಯಿಯ ಮೂಲಕ ಪ್ರವೇಶಿಸುತ್ತವೆ. ಎಷ್ಟೋ ದೆವ್ವಗಳು ಮಾನವನ ದೇಹವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದರೂ ಅದು ಯಾರಿಗೂ ತಿಳಿದಿರುವುದೇ ಇಲ್ಲ. ಬಾಣಂತಿ, ಋತುವಾಗಿರುವ ಹೆಣ್ಣುಮಕ್ಕಳು, ಮದುಮಕ್ಕಳು ಮುಂತಾದ ಹಸಿ ಮೈಯವರನ್ನು ದೆವ್ವಗಳು ಸುಲಭವಾಗಿ ಮೆಟ್ಟುತ್ತವೆ. ದಾರಿಯಲ್ಲಿ ಹೋಗುತ್ತಿರುವವರನ್ನು ಅವು ಅವರ ಪರಿಚಿತ ವ್ಯಕ್ತಿಗಳ ಧ್ವನಿಯನ್ನು ಅನುಕರಿಸಿ ಕೂಗುತ್ತವೆ. ಉತ್ತರಿಸಿದರೆ ಮೆಟ್ಟಿಕೊಳ್ಳುತ್ತವೆ. ದೆವ್ವಗಳ ಅದ್ಭುತ ಶಕ್ತಿಯೆಂದರೆ ಪ್ರಪಂಚದ ಯಾವ ಮೂಲೆಯಲ್ಲಿ ಯಾವ ವಸ್ತುವಿದೆ ಎಲ್ಲಿ ಏನಾಗುತ್ತಿದೆ ಎಂಬುದನ್ನು ಇದ್ದಲ್ಲಿ ತಿಳಿದುಕೊಳ್ಳುವುದು. ದೆವ್ವಗಳು ಮನುಷ್ಯರ ಮೇಲೆ ತುಂಬಿ ಬಂದಾಗ ಅವರು ಮೂರ್ಛೆ ಹೋಗುತ್ತಾರೆ. ಕಟಕಟನೆ ಹಲ್ಲು ಕಡಿಯುತ್ತಾರೆ. ಕಣ್ಣುಗುಡ್ಡೆಗಳನ್ನು ಭಯಂಕರವಾಗಿ ತೇಲಿಸುತ್ತಾರೆ. ತಲೆಯನ್ನು ಕೆದರಿಕೊಂಡು ಓಲಾಡುತ್ತಾರೆ. ಕೆಟ್ಟದಾಗಿ ಕಿರುಚುತ್ತಾರೆ. ಹೊಟ್ಟೆ ನುಲಿದಂತಾಗಿ ಹೊರಳುತ್ತಾರೆ. ವಿಕಾರವಾಗಿ ನಗುತ್ತಾರೆ. ಭಯಂಕರವಾಗಿ ಅಳುತ್ತಾರೆ. ಕೆಲವು ದೆವ್ವಗಳು ಮೈದುಂಬಿ ಬಂದಾಗ ಹರ್ಷಚಿತ್ತದಿಂದ ತಮ್ಮ ವೃತ್ತಾಂತವನ್ನೆಲ್ಲ ಹೇಳಿಕೊಳ್ಳುವುದೂ ಉಂಟು. ಹೇಳಿಕೊಳ್ಳುವಾಗ ತಾವು ದೆವ್ವವಾಗುವ ಮುನ್ನ ಮನುಷ್ಯರಾಗಿದ್ದಾಗ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದವೋ ಅದೇ ಭಾಷೆಯಲ್ಲಿ ದೆವ್ವಾವಾದಾಗಲೂ ಮಾತನಾಡುತ್ತವೆ. ಕೆಲವು ದೆವ್ವಗಳು ಜ್ಯೋತಿಷ್ಯ ಹೇಳುವುದು ಕಳುವಾಗಿದ್ದ ವಸ್ತುಗಳನ್ನು ಪತ್ತೆ ಮಾಡುವುದು ಮುಂತಾದ ಕಾರ್ಯಗಳನ್ನು ಮಾಡಿಕೊಟ್ಟಿವೆ. ಕೆಲವು ದೆವ್ವಗಳು ಮೈದುಂಬಿ ಬಂದಾಗ ತಾವು ದೇವರುಗಳೆಂದು ಸುಳ್ಳುಹೇಳಿಕೊಂಡು ಜನರ ಕಷ್ಟಸುಖಾದಿಗಳನ್ನು ವಿಚಾರಿಸಿ ಶಾಸ್ತ್ರ ಮುಂತಾದವುಗಳಿಂದ ಪರಿಹಾರ ಸೂಚಿಸಿರುವ ಘಟನೆಗಳೂ ಇವೆ. ದೆವ್ವಗಳಲ್ಲಿ ಹೆಚ್ಚಿನವು ತುಂಟ ದೆವ್ವಗಳೆ. ಅವು ದೂರದಲ್ಲಿ ನಿಂತು ಮನೆ ಮೇಲೆ ಕಲ್ಲೆಸೆಯುತ್ತವೆ, ಸಿಳ್ಳುಹಾಕಿ ಕರೆಯುತ್ತವೆ, ಮಲಗಿದ್ದವರನ್ನು ಅದುಕಿಕೊಂಡು ಉಸಿರಾಡಲು ತೊಂದರೆ ಕೊಡುತ್ತವೆ. ಮೈಮೇಲೆ ಬಂಡೆ ಬಿದ್ದಂತೆ ಭಾರಹಾಕಿ ಕಾಡುತ್ತವೆ. ಗಾಡಿ ಬರುತ್ತಿದ್ದರೆ ಎತ್ತುಗಳನ್ನು ಅಡ್ಡಹಾಕಿ ಚಕ್ರ ಕದಲದಂತೆ ಹಿಡಿದು ನಿಲ್ಲಿಸುತ್ತವೆ. ಹಾಸಿಗೆಯಲ್ಲಿ ಮಲಗಿರುವವರನ್ನು ಹಾಸಿಗೆ ಸಮೇತ ಬೇರೆಡೆಗೆ ಕೊಂಡೊಯ್ದು ಮಲಗಿಸುತ್ತದೆ. ಕಾಡಿನಲ್ಲಿ ವಾಸವಿರುವವರ ಗುಡಿಸಲುಗಳಿಗೆ ಬೆಂಕಿಹಾಕಿ ಕುಣಿಯುವುದೂ ಅವುಗಳ ಒಂದು ಚೇಷ್ಟೆ. ರಾತ್ರಿಯ ವೇಳೆಯಲ್ಲಿ ಅವು ಎಳೆಯಮಕ್ಕಳಂತೆ ಅತ್ತು ಮನುಷ್ಯರ ಅನುಕಂಪೆಯನ್ನು ಗಳಿಸಿಕೊಂಡು ಅವರು ಮಗುವನ್ನು ಎತ್ತಿಕೊಳ್ಳಹೋದಾಗ ವಿಚಿತ್ರಾಕಾರವಾಗಿ ಬೆಳೆದು ಬೆದರಿಸುತ್ತವೆ. ಅವರು ಹೆದರುವ ಸ್ವಭಾವದವರಾಗಿದ್ದರೆ ಅವರ ಜೀವವನ್ನೂ ಮೆಟ್ಟಿಕೊಲ್ಲುತ್ತವೆ. ಹೀಗೆ ದೆವ್ವ ಮೆಟ್ಟದವರು ರಕ್ತ ಕಾರಿ ಸತ್ತು ತಾವೂ ದೆವ್ವಗಳಾಗುತ್ತಾರೆ. 

		ದೆವ್ವ ಕಾಡಿದ ಪ್ರಸಂಗಗಳು : ದೆವ್ವಗಳು ಕಾಡಿದ ಅಸಂಖ್ಯಾತ ಘಟನೆಗಳನ್ನು ಹಳ್ಳಿಗರು ರಸವತ್ತಾಗಿ ವರ್ಣಿಸುತ್ತಾರೆ. ಕೆಲವರು ತಾವು ದೆವ್ವಗಳೊಡನೆ ಹೋರಾಡಿ ಜಯಶೀಲರಾಗಿ ಬಂದೆವೆಂಬ ಕಥೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರ ಈ ಸಾಹಸದ ಕಥೆಗಳು ಅವರ ಧೈರ್ಯಶೌರ್ಯಗಳ ಸಂಕೇತವಾಗಿವೆ. ಆದರೆ ಅವುಗಳ ಸತ್ಯಾಂಶ ಅವರಿಗೆ ಮಾತ್ರ ಗೊತ್ತು. ಏಕೆಂದರೆ ದೆವ್ವಗಳಿವೆ ಎಂದು ನಂಬುವ ಬಹಳಷ್ಟು ಮಂದಿ ಅವನ್ನು ನೋಡಿಲ್ಲ. ನೋಡಿಲ್ಲವೆಂದ ಮಾತ್ರಕ್ಕೆ ಅವರು ನಿರ್ಭಯರಾಗಿದ್ದಾರೆ ಎಂದರ್ಥವಲ್ಲ. ದೆವ್ವ ಅಗೋಚರಶಕ್ತಿಯಾದ್ದರಿಂದ ಎಂಥ ಗಂಡುಗಲಿಗಳಿಗೂ ಅವುಗಳ ಬಗೆಗೆ ಕೊಂಚ ಅಳುಕು ಇದ್ದೇ ಇರುತ್ತದೆ. ಹಳ್ಳಿಗರು ಗಾಳಿ ಕಾಟವನ್ನು ಅನುಭವಿಸಿದ ಎದುರಿಸಿದ ಅಥವಾ ಅವಕ್ಕೆ ತುತ್ತಾದ ಪ್ರಸಂಗಗಳು ಬೇಕಾದಷ್ಟಿವೆ. ಒಂದೆರಡು ಪ್ರಸಂಗಗಳನ್ನು ಇಲ್ಲಿ ಉದಾಹರಿಸಲಾಗಿದೆ. 

	ಕೆಲವು ದೆವ್ವಗಳು ಮನೆಯ ಒಳಭಾಗದಲ್ಲೇ ವಾಸವಿದ್ದರೂ ಯಾರಿಗೂ ಗೊತ್ತಿರುವುದಿಲ್ಲ. ಅವು ಅಮಾವಾಸ್ಯೆಯ ರಾತ್ರಿಗಳಲ್ಲಿ ಧಡಧಡನೆ ಮನೆ ಬಾಗಿಲು ತಟ್ಟುವುದು, ದನಕರುಗಳನ್ನು ಬಲಿ ತೆಗೆದುಕೊಳ್ಳುವುದು, ಮನೆಯಲ್ಲಿ ಕಷ್ಟನಷ್ಟಗಳನ್ನುಂಟು ಮಾಡುವುದು ಮುಂತಾದ ಕಾರ್ಯದಲ್ಲಿ ತೊಡಗುತ್ತವೆ. ಇಂಥ ವಿಷಯಕ್ಕೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಪಟೇಲ್ ಕಾಳೇಗೌಡರ ಮನೆಯಲ್ಲಿ ನಡೆದ ಒಂದು ಘಟನೆ ಒಳ್ಳೆಯ ನಿದರ್ಶನ. ಸಣ್ಣಯ್ಯನವರ ಬೀದಿಯಲ್ಲಿ ವಾಸವಿದ್ದ ಗೌಡರು ಬೆಂಗಳೂರು-ಮಂಗಳೂರು ರಸ್ತೆ ಬದಿಯಲ್ಲಿದ್ದ ತಮ್ಮ ಹೊಲದಲ್ಲಿ ಒಂದು ಮನೆಯನ್ನು ಕಟ್ಟಿ ವಾಸಕ್ಕೆ ಹೊರಟರು. ಅವರು ಆ ಮನೆಗೆ ಹೋದ ಕೆಲವೇ ದಿನಗಳಲ್ಲಿ ಅವರ ಬೆಲೆ ಬಾಳುವ ಎತ್ತುಗಳಲ್ಲಿ ಒಂದು ಇದ್ದಕ್ಕಿದ್ದಂತೆ ಅಸು ನೀಗಿತು. ಇದಕ್ಕೆ ಕಾರಣವೇ ತಿಳಿಯಲಿಲ್ಲ. ಮತ್ತೆರಡು ವರ್ಷಗಳ ತರುವಾಯ ಮತ್ತೊಂದು ಹೋರಿ ಪ್ರಾಣಬಿಟ್ಟಿತು, ಅಲ್ಲದೆ ಅಮಾವಾಸ್ಯೆ ಮುಂದಾರದಲ್ಲಿ ಮನೆಯಸುತ್ತ ಯಾರೋ ಗುಡುಗುಡನೆ ಓಡಾಡಿದಂತಾಗುತ್ತಿತ್ತು. ಕಳ್ಳರಿರಬಹುದೆಂದು ಆಳುಕಾಳುಗಳನ್ನೆಲ್ಲ ಎಚ್ಚರಿಸಿ ಹುಡುಕಿದರೆ ಯಾರ ಸುಳಿವೂ ಇರುತ್ತಿರಲಿಲ್ಲ. ಕಳ್ಳತನವೂ ಆಗುತ್ತಿರಲಿಲ್ಲ. ಕೆಲವೊಮ್ಮೆ ನಡುರಾತ್ರಿಯಲ್ಲಿ ಬಾಗಿಲನ್ನು ಧಡಧಢನೆ ತಟ್ಟಿದಂತಾಗುತ್ತಿತ್ತು. ಬಾಗಿಲು ತೆರೆದರೆ ಯಾರೂ ಇರುತ್ತಿರಲಿಲ್ಲ. ಇದು ಭೂತಚೇಷ್ಟೆಯೆಂದು ನಿರ್ಧರಿಸಿದ ಪಟೇಲರು ಮಲಯಾಳಂನಿಂದ ಮಂತ್ರವಾದಿಯೊಬ್ಬನನ್ನು ಕರೆಸಿ ಮನೆಗೆ ದಿಗ್ಬಂಧನ ಮಾಡಿಸಿದರು. ಇದರಿಂದ ಏನೂ ಪ್ರಯೋಜನವಾಗದಂತೆ ಕಾಣಲಿಲ್ಲ. ಅವರ ಮಗ ಪಿ. ಕೆ. ಶಿವಪ್ಪನವರು ಕೆ. ಆರ್. ನಗರ ತಾಲ್ಲೂಕಿನ ಹೆಬ್ಬಾಳು ಗ್ರಾಮದ ತಮ್ಮ ಹೆಂಡತಿಯ ಮನೆಗೆ ಹೋಗಿದ್ದಾಗ ಅಲ್ಲಿ ಒಬ್ಬ ಮುದುಕಿಯ ಮೈಮೇಲೆ ವೆಂಕಟೇಶ್ವರ ದೇವರು ಮೈತುಂಬಿ ಬಂದು ಯಂತ್ರಮಂತ್ರಶಾಸ್ತ್ರಾದಿಗಳನ್ನು ಮಾಡುತ್ತಿರುವುದನ್ನು ಕಂಡು ಕುತೂಹಲಕ್ಕಾಗಿ ತಾವೂ ಶಾಸ್ತ್ರ ಕೇಳಿದರು. ಆಗ ಆ ದೇವರು ನಿಮ್ಮ ಮನೆಯಲ್ಲೊಂದು ಗಾಳಿ ಸೇರಿಕೊಂಡಿದೆ. ನೀವು ಮನೆ ಕಟ್ಟಿಸುವಾಗ ನೆಲ ಸೋಸಿಲ್ಲ. ಹಿಂದೆ ಯಾರೋ ಒಬ್ಬ ಹೆಂಗಸು ಕದ್ದು ಬಸುರಿಯಾಗಿ ಹೆತ್ತಮಗುವನ್ನು ತಂದು ಆ ಸ್ಥಳದಲ್ಲಿ ಹೂತಿದ್ದಳು. ಅದು ದೆವ್ವವಾಗಿ ಈಗಲೂ ಬೆಳೆಯುತ್ತಿದೆ. ನಿಮಗೆ ಕಷ್ಟ ನಷ್ಟಗಳನ್ನು ಉಂಟುಮಾಡುತ್ತಿದೆ-ಎಂದಿತು, ವಿಷಯವನ್ನು ಕೇಳಿದ ಶಿವಪ್ಪನವರು ಕುತೂಹಲ ಭರಿತರೂ ಭಯಚಕಿತರೂ ಆಗಿ ಆ ದೆವ್ವವನ್ನು ಮನೆಯಿಂದ ಹೊರಗಟ್ಟಲು ನೆರವು ಕೇಳಿದರು. ದೇವರು ಅದಕ್ಕೊಪ್ಪಿತು. ಹೆಂಗಸನ್ನು ಹೆಬ್ಬಾಳಿನಿಂದ ಪಿರಿಯಾಪಟ್ಟಣಕ್ಕೆ ಕರೆದುತಂದರು. ಅವಳು ಕೋಳಿಕೂಗುವ ಹೊತ್ತಿಗೆ ಎದ್ದು ಸ್ನಾನ ಮಾಡಿ ಮುಗಿಸಿ ಪೂಜೆಗೆ ಕುಳಿತಳು. ಮೈಮೇಲೆ ವೆಂಕಟೇಶ್ವರ ಸ್ವಾಮಿ ಆವೇಶ ಬಂದಾಗ ಧಿಗ್ಗನೆ ಮೇಲೆದ್ದಳು. ಮನೆಯ ನೆಲದಲ್ಲಿ ಮೂರು ಸ್ಥಳಗಳನ್ನು ತಟ್ಟಿ ಶಬ್ದಮಾಡಿ, ಕಣಜದ ಮನೆಯ ಮೂಲೆಯೊಂದನ್ನು ಅಗೆಯಲು ಸೂಚಿಸಿದಳು. ಆಳುಗಳು ಒಂದಾಳುದ್ದದ ವರೆಗೂ ಗುಂಡಿ ತೋಡಿದರು. ಆಗ ಮುದುಕಿ ಅಗೆಯುವುದನ್ನು ನಿಲ್ಲಿಸುವಂತೆ ಹೇಳಿ ತಾನೇ ಹಳ್ಳಕ್ಕಿಳಿದು ಅಗೆಯ ತೊಡಗಿದಳು. ಮನೆಯ ತುಂಬ ಕೆಟ್ಟವಾಸನೆ ಹರಡಿಕೊಂಡಿತು. ಆ ಮುದುಕಿ ಹಳ್ಳದೊಳಗಿಂದ ಅಸ್ಥಿಪಂಜರವೊಂದನ್ನು ಮೇಲತ್ತಿ ತಂದಳು. ಅದನ್ನು ಯಾರೂ ಮುಟ್ಟಬೇಡಿರೆಂದು ಹೇಳಿ ಮಂಕರಿಗೆ ತುಂಬಿ ತಾನೇ ಶ್ಮಶಾನಕಟ್ಟೆಗೊಯ್ದು ವಿಧಿಪೂರ್ವಕವಾಗಿ ಸಂಸ್ಕಾರ ಮಾಡಿಸಿದಳು. ಒಂಬತ್ತನೆಯ ದಿನದಲ್ಲಿ ಆರಾಧನೆ ಮಾಡಿ ಅನ್ನ ಹಾಕಲು ಹೇಳಿದಳು. ಆ ಒಂಬತ್ತು ದಿನಗಳ ರಾತ್ರಿಯೂ ದೆವ್ವ ಬಂದು ಬಾಗಿಲನ್ನು ಧಡಧಡನೆ ಬಡಿಯುತ್ತಿತ್ತು. ಸತ್ತವರಿಗೆ ಗಣಾರಾಧನೆ ಮಾಡುವಂತೆ, ಆ ದೆವ್ವದ ಹೆಸರಿನಲ್ಲಿ ಅನ್ನ ಹಾಕಿದರು. ಈಗ ಆ ಮನೆಯಲ್ಲಿ ದೆವ್ವದ ಕಾಟ ಯಾವುದೂ ಇಲ್ಲ. ಇಂತ ಘಟನೆಗಳು ವಿಚಿತ್ರವಾಗಿ ಕಂಡರೂ ಸತ್ಯ. ಆದರೆ ಎಲ್ಲ ವಿಚಿತ್ರ ಘಟನೆಗಳನ್ನು ದೆವ್ವಕ್ಕೇ ಆರೋಪಿಸಲಾಗುವುದಿಲ್ಲ. ಕೆಲವು ದೆವ್ವಗಳು ಸದ್ಗುಣಗಳನ್ನು ಮೆರೆದಿರುವ ಉದಾಹರಣೆಗಳೂ ಇವೆ. ಇಂಥ ಘಟನೆಗಳು ಗ್ರಾಮಜೀವನದಲ್ಲಿ ತುಂಬಿಹೋಗಿವೆ. ನಗರಗಳಲ್ಲಿ ದೆವ್ವಗಳೆಲ್ಲಿವೆ ಎಂದು ಪ್ರಶ್ನಿಸಿದರೆ ಇಲ್ಲ ಎಂದು ಹೇಳಲು ಬಾರದು. ಆದರೆ ದೆವ್ವಗಳಿಗೆ ಬೆಳಕು ಹಾಗೂ ಜನಜಂಗುಳಿಯೆಂದರೆ ಒಗ್ಗುವುದಿಲ್ಲವಾದ್ದರಿಂದ ನಗರಗಳಲ್ಲಿ ದೆವ್ವಗಳು ವಿರಳವೆಂದೇ ಕೆಲವರು ಹೇಳುತ್ತಾರೆ.

ಭೂತವಶೀಕರಣ: ಬಸುರಿ ಅಥವಾ ಬಾಣಂತಿ ಸತ್ತರೆ ಅವಳನ್ನು ಹೂಳಬಾರದು. ಹೂತರೆ ಮಳೆ ಬರುವುದಿಲ್ಲ ಎಂಬ ನಂಬಿಕೆ ಕೆಲವು ಕಡೆ ಇದೆ. ಆದರೆ ಇದಕ್ಕೂ ಹೆಚ್ಚಿನ ಕಾರಣ ಮಂತ್ರವಾದಿಗಳ ಕಾಟ ಎಂದು ಹೇಳುತ್ತಾರೆ. ಅದಕ್ಕಾಗಿ ಅವಳನ್ನು ಸುಟ್ಟು ಬರುವ ಪದ್ಧತಿ ಇದೆ. ಸುಡದೆ ಹೂತು ಬಂದ ಪಕ್ಷದಲ್ಲಿ ಇದನ್ನು ನೋಡಿಕೊಂಡಿದ್ದ ಮಂತ್ರವಾದಿ ಹುಣ್ಣಿಮೆಯ ಮಧ್ಯರಾತ್ರಿಯಲ್ಲಿ ಕಾಳಿಕಾದೇವಿಯ ಮಂತ್ರವನ್ನು ಜಪಿಸುತ್ತ ಕರೀಕುರಿಯೊಡನೆ ಶ್ಮಶಾನಕ್ಕೆ ಬಂದು ಗುದ್ದಕ್ಕೆ ನೇರವಾಗಿ ಇಪ್ಪತ್ತು ಗಜ ದೂರದಲ್ಲಿ ಏಳು ಬಣ್ಣಗಳ ರಂಗೋಲಿಯಲ್ಲಿ ಮಂಡಲ ಬರೆದು ಅದರ ಮಧ್ಯೆ ಒಂದು ಕಬ್ಬಿಣದ ಗೂಟ ನೆಟ್ಟು ಅದಕ್ಕೆ ಬಲಿ ಕಟ್ಟಿ ಮಂತ್ರ ಹೇಳುತ್ತ ಪೂಜೆಮಾಡುತ್ತಾನೆ. ಆ ಗೂಟದಿಂದ ಒಂದು ಹಸೀ ನೂಲಿನ ಹುರಿಯನ್ನು ಎಳೆದು ತಂದು ಗುದ್ದದ ತುದಿಗೊಂದು ಗೂಟ ನೆಟ್ಟು ಅದಕ್ಕೆ ಕಟ್ಟುತ್ತಾನೆ. ಗುದ್ದದ ಹಿಂಭಾಗದಲ್ಲಿ ಮತ್ತೊಂದು ಕಬ್ಬಿಣದ ಗೂಟ ಹೊಡೆದು ಅದನ್ನು ಹಿಡಿದುಕೊಂಡು ಕುಳಿತುಕೊಳ್ಳುತ್ತಾನೆ. ಈಗ ಮಣ್ಣಿನ ಗೊಂಬೆಗಳೆರಡಕ್ಕೂ ಪೂಜೆಮಾಡಿ ಜೀವತುಂಬಿ ಅವುಗಳ ಕೈಗೆ ಕತ್ತಿ ಕೊಡುತ್ತಾನೆ. ಅವು ನೂಲಿನ ಮೇಲೆ ಹೆಜ್ಜೆಯಿಡುತ್ತ ಮಂಡಲ ಬಳಿಗೆ ಬರುತ್ತವೆ. ಮಂತ್ರವಾದಿ ಒಂದೇ ಸಮನೆ ಮಂತ್ರ ಹೇಳತೊಡಗುತ್ತಾನೆ. ಈಗ ಗುದ್ದ ಇಬ್ಭಾಗವಾಗಿ ಅದರಿಂದ ಹೆಣ ಮೇಲೆದ್ದು ತಕತಕನೆ ಕುಣಿಯಲಾರಂಭಿಸುತ್ತದೆ. ಕುಣಿಕುಣೀದಾಡುತ್ತ ಹುರಿಯ ನೇರಕ್ಕೆ ನಡೆದು ಮಂಡಲವನ್ನು ತಲುಪಿ ಅಲ್ಲಿ ಕಟ್ಟಿದ್ದ ಕರಿಕುರಿಯ ಗೋಮಾಳೆಯನ್ನು ಕಚ್ಚಿ ರಕ್ತ ಹೀರುತ್ತದೆ. ಆಗ ಮಂತ್ರದ ಗೊಂಬೆಗಳು ಕೈ ಕೊಡ್ತೀಯಾ, ಕಾಲ್ ಕೊಡ್ತೀಯಾ ಎಂದು ಹೇಳುತ್ತ ಕುಣಿಯುತ್ತಿರುತ್ತವೆ. ಆಗ ಹೆಣ ಎಡದ ಕೈಯನ್ನು ನೀಡುತ್ತದೆ. ಗೊಂಬೆಗಳು ಹಸ್ತವನ್ನು ಕತ್ತರಿಸಿಕೊಳ್ಳುತ್ತವೆ. ತತ್‍ಕ್ಷಣವೇ ಹೆಣ ದೊಪ್ಪನೆ ಕೆಳಗುರುಳುತ್ತದೆ.

ಬಿದ್ದ ಹೆಣಕ್ಕೆ ಮೋಡಿಹಾಕಿ ಅದು ಮತ್ತೆ ಗುದ್ದಕ್ಕೆ ಬೀಳುವಂತೆ ಮಾಡುತ್ತಾನೆ. ಗೊಂಬೆಗಳು ಕುಣಿದಾಡುತ್ತ ಬಂದು ಕತ್ತರಿಸಿ ತಂದ ಕೈಯನ್ನು ಮಂತ್ರವಾದಿಗೆ ಒಪ್ಪಿಸುತ್ತವೆ. ಆ ಕೈಯನ್ನು ಅಮಾವಾಸ್ಯೆಯ ಮಧ್ಯರಾತ್ರಿಯಲ್ಲಿ ಹೊಳೆ ದಡಕ್ಕೆ ತೆಗೆದುಕೊಂಡು ಹೋಗಿ ಕಾಳಿಕಾದೇವಿ ಪೂಜೆ ಮಾಡಿ ಅವಳಿಗೂ ಒಂದು ಕರೀತಲೆ ಬಲಿಕೊಟ್ಟು ಅವಳ ಹೆಸರಿನಲ್ಲಿ ತಾನು ಮಾಯಮಂತ್ರ ಮುಂತಾದವನ್ನು ಮಾಡುವುದಾಗಿ ಹೇಳುತ್ತಾನೆ. ಆಗ ಕಾಳಿ ಶ್ಮಶಾನದಲ್ಲಿ ಸುಟ್ಟಿರುವ ಹೆಣಗಳ ಬೂದಿಯನ್ನು ಅವನಿಗೆ ಕೊಡುತ್ತಾಳೆ. ಇದರಿಂದ ಭೂತ ಅವನಿಗೆ ವಶವಾಗುತ್ತದೆ. ಈ ಭೂತದ ಸಹಾಯದಿಂದ ಮಂತ್ರವಾದಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾನೆ.  ಕೆಲವು ಮಂತ್ರವಾದಿಗಳು ಕಾಳಿಕಾದೇವಿಗೆ ಬದಲಾಗಿ ಬೇತಾಳಗಳನ್ನು ಆಶ್ರಯಿಸುತ್ತಾರೆ.

ದೆವ್ವ ಬಿಡಿಸುವುದು: ಅವು ಮೈ ತುಂಬಿ ಬಂದಾಗ ದೆವ್ವಗಳು ಹಿಡಿದುಕೊಂಡಿವೆ ಎಂದು ಸುಲಭವಾಗಿ ಗೊತ್ತಾಗುತ್ತದೆ, ಇಲ್ಲದೆ ಹೋದರೆ ಅವು ಮಾನವ ಶರೀರವನ್ನು ಮನೆಮಾಡಿಕೊಂಡಿದ್ದರೂ ತಿಳಿಯುವುದು ಕಷ್ಟ, ಮಕ್ಕಳಿಗೆ ದೆವ್ವದ ಕಾಟವಿದೆಯೆಂಬುದನ್ನು ಅವು ಮಲಗಿರುವಾಗ ಬೆಚ್ಚುವುದರಿಂದ ಚಿಟ್ಟನೆ ಚೀರುವುದರಿಂದ ರಚ್ಚೆ ಹಿಡಿಯುವುದರಿಂದ ಗುರುತಿಸಿ ತತ್‍ಕ್ಷಣವೇ ಯಂತ್ರ ಮಂತ್ರಗಳನ್ನು ಹಾಕಿಸುತ್ತಾರೆ. ಇಲ್ಲವೆ ರಚ್ಚೆತಾಳಿಯನ್ನು ಮಾಡಿಸಿಕಟ್ಟಿಸುತ್ತಾರೆ.

ಮೈಮೇಲೆ ಆವೇಶ ಬರುವ ದೆವ್ವಗಳನ್ನು ಬಿಡಿಸಲು ಹಲವಾರು ಕ್ರಮಗಳನ್ನು ಪ್ರಪಂಚಾದ್ಯಂತ ಕಾಣಬಹುದಾಗಿದೆ. ಕೆಲವು ಕ್ರಮಗಳನ್ನು ಇಲ್ಲಿ ಪ್ರಸ್ತಾಪಿಸಿದೆ.

ದೆವ್ವ ಹಿಡಿದವರನ್ನು ದೇವಾಲಯಗಳಿಗೆ ಕರೆತಂದೆರೆ ಅರ್ಚಕ ದೆವ್ವವನ್ನು ಬಿಡಿಸುತ್ತಾನೆ.  ಬೊಪ್ಪಗೌಡನಪುರದ ಮಂಟೇಸ್ವಾಮಿ ಮಠದ ತಮ್ಮಡಿಗಳು ದೆವ್ವ ಬಿಡಿಸುತ್ತಾರೆ. ಮಂಟೇಸ್ವಾಮಿಗೆ ಪೂಜೆ ಮಾಡಿದ ಮೇಲೆ ದೆವ್ವ ಹಿಡಿದವರನ್ನು ತಲೆಮೇಲೆ ಕೈಜೋಡಿಸಿಕೊಂಡು ಕುಳಿತುಕೊಳ್ಳಲು ಹೇಳುತ್ತಾರೆ. ಜಾಗಟೆ, ನಗಾರಿ, ಗಂಟೆಗಳನ್ನು ಕಿವಿಹರಿಯುವಂತೆ ಬಾರಿಸುತ್ತಾರೆ. ಈ ಸದ್ದುಗಳಿಗೆ ದೆವ್ವ ಮೈತುಂಬಿ ಬರುತ್ತದೆ. ತಮ್ಮಡಿ ತತ್‍ಕ್ಷಣವೆ ಒಂದು ಬತ್ತಿ ತಲೆಗೂದಲನ್ನು ಹಿಡಿದು ಗಂಟು ಹಾಕುತ್ತಾನೆ. ಅನಂತರ ದೆವ್ವ ಎಲ್ಲಿಂದ, ಏಕೆ, ಹೇಗೆ ಬಂದಿತೆಂಬುದರ ವಿಚಾರಣೆ ನಡೆಯುತ್ತದೆ. ದೆವ್ವ ಮಾತಾಡದಿದ್ದರೆ ಬೆತ್ತದಿಂದ ರಪರಪನೆ ಬಾರಿಸುತ್ತಾನೆ. ಬೆದರಿದ ದೆವ್ವ ಬಾಯಿ ಬಿಡುತ್ತದೆ. ಆದರೆ ಬಯಕೆ ಏನೆಂದು ಕೇಳುತ್ತಾನೆ. ಅದು ಬಯಸಿದ ಊಟ ತಿಂಡಿಯನ್ನು ಮುಂದಿನ ವಾರ ಕೊಡಿಸುವುದಾಗಿ ಹೇಳುತ್ತಾನೆ. ಮಂಟೇಸ್ವಾಮಿ, ಸಿದ್ಧಪ್ಪಾಜಿ, ರಾಚಪ್ಪಾಜಿ, ದೊಡ್ಡಮ್ಮತಾಯಿಯರ ಪಾದದಾಣೆಗೂ ಹೋಗುವುದಾಗಿ ಅದು ಹೇಳುತ್ತದೆ. ಹೋಗುವುದು ನಿಶ್ಚಯವಾದರೆ ನಿನ್ನ ತಲೆಯಿಂದ ಮೂರು ಬತ್ತಿ ಕೂದಲನ್ನು ಕಿತ್ತುಕೊಡು ಎಂದು ಕೇಳುತ್ತಾನೆ. ದೆವ್ವ ತಲೆಗೂದಲನ್ನು ಕಿತ್ತುಕೊಡುತ್ತದೆ. ಮುಂದಿನ ವಾರ ಆ ಜನ ಉಪವಾಸದಿಂದಿದ್ದು ಸ್ನಾನ ಮಡಿಯಿಂದ ದೇವಾಲಯಕ್ಕೆ ಬರುತ್ತಾರೆ. ಹಿಂದಿನ ವಾರದ ರೀತಿಯಲ್ಲಿಯೇ ದೆವ್ವ ಮೈಮೇಲೆ ಬರುವಂತೆ ಮಾಡಲಾಗುತ್ತದೆ. ಅದು ಪ್ರೀತಿಪಟ್ಟು ಕೇಳಿಕೊಂಡಿದ್ದ ತಿನಿಸಿನ್ನು ಅದಕ್ಕೆ ಕೊಡುತ್ತಾರೆ. ಇದಾದ ಮೇಲೆ ದೇವರಿಗೆ ನಮಸ್ಕಾರ ಮಾಡುವಂತೆ ಹೇಳುತ್ತಾರೆ, ಅದು ನಮಸ್ಕರಿಸಿ ತಾನು ಸತ್ಯವಾಗಿಯೂ ಬಿಟ್ಟುಹೋಗುವುದಾಗಿ ಆಣೆಮಾಡಿ ಹೇಳುತ್ತದೆ. ಅಲ್ಲಿಂದ ಹೊರಕ್ಕೆ ಕರತಂದು, ಹೊರಲಾರದ್ದು ಒಂದು ಕಲ್ಲು ಗುಂಡಿಗೆ ತೀರ್ಥ ಸಿಂಪಡಿಸಿ ಪೂಜೆ ಮಾಡಿ ಅದನ್ನು ಹೊತ್ತುಕೊಳ್ಳಲು ದೆವ್ವಕ್ಕೆ ಹೇಳುತ್ತಾರೆ.  ಹತ್ತು ಜನ ಹೊರಲಾರದ ಆ ಗುಂಡನ್ನು ದೆವ್ವ ಹಿಡಿದಿರುವವರು ಸರಾಗವಾಗಿ ಹೊತ್ತುಕೊಂಡು ಮುಂದೆ ಮುಂದೆ ಸಾಗುತ್ತಾರೆ. ಅಲ್ಲಿಂದ ಎಲ್ಲರೂ ಅವರನ್ನು ಮೊಡ್ಡಮ್ಮತಾಯಿಯ ಕೆರೆಗೆ ಕರೆದುತಂದು ನಡುಮಟ್ಟ ನೀರಿನಲ್ಲಿ ಐದುವಾರಗಳಲ್ಲಿ ಮೂರು ಸಾರಿ ಮುಳುಗಿಸಿ ಮೇಲೆತ್ತುತ್ತಾರೆ. ದೆವ್ವ ಹಿಡಿದಿದ್ದವರು ಈಗ ಅದರಿಂದ ಮುಕ್ತರಾಗುತ್ತಾರೆ. ಇದಾದ ಮೇಲೆ ದೇವಾಲಯಕ್ಕೆ ಬಂದು ಪೂಜೆ ಮಾಡಿಸಿ ಐದು ಹಣ ಗಾಳಿಗಾಣ್ಕೆ ಒಪ್ಪಿಸುತ್ತಾರೆ.

ಕಾಡುಕುರುಬರು ದೆವ್ವ ಬಿಡುಸುವುದರಲ್ಲಿ ಸಿದ್ಧಹಸ್ತರು. ಅವರು ದೆವ್ವ ಹಿಡಿದಿದ್ದವರ ಮುಂದೆ ಮಂತ್ರವನ್ನೂದುತ್ತ ಗುಲಗಂಜಿ ತುಂಬಿದ ಸೋರೆ ಬುರುಡೆಯನ್ನು ಅಲ್ಲಾಡಿಸುತ್ತಿರುತ್ತಾರೆ, ದೆವ್ವ ಬಂದವರು ಅದರ ಶಬ್ಧಕ್ಕೆ ತಕ್ಕಂತೆ ಕೆದರಿದ ತಲೆಯನ್ನು ಓಲಾಡಿಸುತ್ತಿರುತ್ತಾರೆ. ಅವನು ಮಂತ್ರವನ್ನೂದುತ್ತಿದ್ದಂತೆ ಬುರುಡೆಯೊಳಗಿನ ಗುಲಗಂಜಿಗಳ ಶಬ್ಧ ಥಟ್ಟದೆ ನಿಲ್ಲುತ್ತದೆ. ಆಗ ದೆವ್ವ ಬುರುಡೆಯೊಳಕ್ಕೆ ಬಂತೆಂದು ಹೇಳಿ ಅದನ್ನು ಶ್ಮಶಾನಕ್ಕೆ ತೆಗೆದುಕೊಂಡು ಹೋಗಿ ಬಲಿಕೊಟ್ಟು ಸುಟ್ಟುಹಾಕುತ್ತಾರೆ. 
ಕಲ್ಲು ಹುಯ್ಯಿಸುತ್ತೇವೆಂದು ಹೇಳಿದರೆ ದೆವ್ವಗಳು ನಡುಗುತ್ತವೆ. ಕಲ್ಲು ಹುಯ್ಯಿಸುವುದೆಂದರೆ ದೆವ್ವಗಳನ್ನು ಸೆರೆಮಾಡುವುದು ಎಂದರ್ಥ. ಮೈಮೇಲೆ ಬಂದು ಕಿರುಕುಳ ಕೊಡುವ ದೆವ್ವಗಳನ್ನು ಗ್ರಾಮದೇವತೆಗಳ ಹೆಸರಿನಲ್ಲಿ ಒಂದು ಚಪ್ಪಡಿಯಲ್ಲಿ ಮುಖಕೈಕಾಲುಗಳು ಹಿಂದಕ್ಕಿರುವಂತೆ ಕೆತ್ತಿಸಿ, ದೇವಸ್ಥಾನದ ಮುಂದೆ ನೆಟ್ಟು, ಅದಕ್ಕೆ ಅನ್ನಹಾಕಿ ಗುಡಿಗೆ ಹೋಗುವ ಜನರೆಲ್ಲ ತುಳಿಯುವಂತೆ ಮಾಡುತ್ತಾರೆ. ಹೀಗೆ ದೇವರ ಸನ್ನಿಧಿಯಲ್ಲಿ ಬಂದಿಯಾದ ದೆವ್ವ ಯಾರನ್ನೂ ಹಿಡಿದುಕೊಳ್ಳಲಾರುದು.
ಮನೆಗಳಿಗೆ ದೆವ್ವ ಸೇರಿಕೊಂಡಿದ್ದರೆ ಬೇವಿನ ಎಲೆ ಬಜೆ ನವಿಲುಗರಿ ಹಾವಿನ ಪೊರೆ ನವಣೆನೆಲ್ಲು ಮತ್ತು ಇಂಗು ಇವುಗಳನ್ನೆಲ್ಲ ಸೇರಿಸಿ ಧೂಪ ಹಾಕಿದರೆ ಅದರ ವಾಸನೆ ಎಷ್ಟು ದೂರ ತಟ್ಟುತ್ತದೋ ಅಲ್ಲಿಯವರೆಗೂ ದೆವ್ವಗಳು ಸುಳಿಯುವುದಿಲ್ಲವೆಂದು ನಂಬಿಕೆ.
ಪ್ರೇತಬಾಧಾ ನಿವಾರಕ ಯಂತ್ರವನ್ನು ಕಟ್ಟುವುದರಿಂದ ದೆವ್ವಗಳು ಆ ಚೀಟಿ ಇದ್ದವರನ್ನು ಸ್ಪರ್ಶಿಸಲು ಹೆದರುತ್ತವೆಯಂತೆ. ಇದು ಚೀಟಿಯ ಒಂದರ ಮಾದರಿ.

ಓಂ
ಹ್ರೀಂ
ಸ್ವ
ಮ

ಕ್ರೀಂ
ಕ್ರೀಂ
ಲಂ
ಜಂ

ತಂ
ಪಂ
ಸಂ
ತಂ

ಠಂ
ಠಂ
ಠಂ
ಠಂ

ಭೋಪಪತ್ರದ ಮೇಲೆ ಈ ಯಂತ್ರವನ್ನು ಬರೆದು ವಿದ್ಯುಕ್ತವಾಗಿ ಪೂಜಿಸಿ ಕೊರಳಿಗೆ ಕಟ್ಟಿದರೆ ಪ್ರೇತಬಾಧೆ ನಿವಾರಣೆಯಾಗುತ್ತದೆ. ಇಷ್ಟೇ ಅಲ್ಲದೆ ದೆವ್ವ ಬಿಡಿಸುವ ಇನ್ನೂ ಹಲವಾರು ಕ್ರಮಗಳನ್ನು ನಾಡಿನಾದ್ಯಂತ ಕಾಣಬಹುದಾಗಿದೆ.

ಭೂತಗಳಿಗೆ ಹೆದರಿ ಅವನ್ನು ಆರಾಧಿಸುವ ಪದ್ಧತಿ ಪ್ರಪಂಚದ ಬಹಳಷ್ಟು ಕಡೆಗಳಲ್ಲಿ ಕಂಡುಬರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆ ಇಂಥ ಒಂದುವಿಶಿಷ್ಟ ಸಂಪ್ರದಾಯ. ತುಮಕೂರು ಹಾಸನ ಚಿತ್ರದುರ್ಗ ಜಿಲ್ಲೆಗಳಲ್ಲಿ ಭೂತಗಳನ್ನು ಚೋಮಗಳು ಎಂದು ಕರೆಯುತ್ತಾರೆ. ಅವು ಗ್ರಾಮದೇವತೆಗಳ ಸಿಬ್ಬಂದಿ ವರ್ಗದಂತಿವೆ. ಅವನ್ನು ತೃಪ್ತಿಪಡಿಸಲು ಬಲಿ ಮುಂತಾದವನ್ನು ಕೊಡುತ್ತಾರೆ. ಬೇತಾಳೇಶ್ವರನ ಗುಡಿಗಳು ಬಹಳ ಕಡೆ ಇದೆ. ದೊಡ್ಡಗದ್ದವಳ್ಳಿಯ ಬೇತಾಳದ ವಿಗ್ರಹವನ್ನು ಇಲ್ಲಿ ನೆನೆಯಬಹುದು. ತಮಿಳುನಾಡು ಹಾಗೂ ಕೇರಳಗಳಲ್ಲೂ ಭೂತಾರಾಧನೆಯ ಪದ್ಧತಿ ಉಳಿದುಬಂದಿದೆ. ಪ್ರತಿಯೊಂದು ನೈಸರ್ಗಿಕ ಘಟನೆಗಳೂ ಭೂತಶಕ್ತಿಯ ಅಭಿವ್ಯಕ್ತಿಯೆಂದು ಭಾವಿಸುವ ಆದಿವಾಸಿಗಳು ಬಹಳಷ್ಟು ಬಗೆಯ ಮನೋರೋಗಗಳನ್ನು ದೆವ್ವಗಳ ಕುತ್ತಿಗೆಗೆ ಕಟ್ಟಿಬಿಡುತ್ತಾರೆ. ಅಲ್ಲದೆ ವೈಚಾರಿಕವಾಗಿ ಚಿಂತಿಸುವವನಿಗೂ ದೆವ್ವಗಳ ರಹಸ್ಯವನ್ನು ಸಂಪೂರ್ಣವಾಗಿ ಬಯಲು ಮಾಡಲು ಸಾಧ್ಯವಾಗಿಲ್ಲ.
(ಪಿ.ಕೆ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ